ಅಣ್ಣ ತಂಗಿ ಪ್ರೀತಿಯ ಕಥೆ | Wonderful Kannada Love Story Reading

ಅಣ್ಣ ತಂಗಿ ಪ್ರೀತಿಯ ಕಥೆ | Wonderful Kannada Love Story

 

ಅಣ್ಣ ತಂಗಿ ಪ್ರೀತಿಯ ಕಥೆ | Wonderful Kannada Love Story Reading
Kannada Love Story

ಅಣ್ಣ ತಂಗಿ ಪ್ರೀತಿಯ ಕಥೆ:

ಮಾರಸಂದ್ರ ಎಂಬ ಹಳ್ಳಿಯಲ್ಲಿ ತಂದೆ-ತಾಯಿ ಕಳೆದುಕೊಂಡ ಅಣ್ಣ-ತಂಗಿಯರಿದ್ದರು. ಇನ್ನೂ ಚಿಕ್ಕವರಾದ ಇವರನ್ನು ನೋಡಲು ಬಂಧುಗಳಾರೂ ಬರುತ್ತಿರಲಿಲ್ಲ. ಪುಟ್ಟ ಅಣ್ಣ-ತಂಗಿ ಅನ್ನೋನ್ಯತೆಯಿಂದ ಎರಡು ಹಸುಗಳನ್ನು ಸಾಕಿಕೊಂಡು ಹಾಲನ್ನು ಮಾರಿ ಜೀವನ ನಡೆಸುತ್ತಿದ್ದರು. ಅಣ್ಣನಾದರೊ ಆಗಾಗ ತಂಗಿಗೆ ಬಣ್ಣಬಣ್ಣದ ಹೂವು, ನೆಲ್ಲಿಕಾಯಿ, ನೇರಳೆ ಹಣ್ಣು, ಸೀಬೆಹಣ್ಣು, ಸೀರೆಕಾಯಿ, ಗಿಲಕಿ ಹಣ್ಣು, ದೋರಾದ ಹುಣಿಸೆಕಾಯಿ ಎಲ್ಲಾ ತಂದು ಕೊಡುತ್ತಿದ್ದ. ತಂಗಿ ಅದನ್ನು ಪ್ರೀತಿಯಿಂದ ತಿನ್ನುತ್ತಿದ್ದಳು.

ಹೀಗಿರಲು ಒಂದು ದಿನ ಹಸು ಮೇಯಿಸಲಿಕ್ಕೆ ಹೋದಾಗ ಬಹುಚೆಂದದ ಕುಂಕುಮದ ಬಣ್ಣದ ದುಂಬಿಯೊಂದು ಹಾಡುತ್ತಾ ಹಾರಾಡುತ್ತಿತ್ತು. ಅದರ ಚೆಂದ ಕಂಡು ಅಣ್ಣನು ತನ್ನ ತಂಗಿಗೆ ಆಟ ಆಡಲಿಕ್ಕೆ ಅದನ್ನು ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿದ. ಉಪಾಯವಾಗಿ ಹಿಡಿದು ಅದರ ಕೊರಳಿಗೆ ದಾರ ಕಟ್ಟಿ ತಂಗಿಗೆ ತಂದುಕೊಟ್ಟ. ಅಂದದ ಬಣ್ಣದ ಕಾರೇ ದುಂಬಿಯನ್ನು ನೋಡಿ ಅವಳಿಗೆ ಬಹಳ ಸಂತೋಷವಾಯಿತು. ತಕ್ಷಣ ಅವಳು ಕಟ್ಟಿದ ದಾರವನ್ನು ನೋಡಿ “ಅಯ್ಯೋ ಪಾಪ, ಅದರ ಕತ್ತಿಗೆ ಎಷ್ಟು ನೋವಾಗುತ್ತಿದೆಯೋ?” ಎಂದು ದಾರ ಬಿಚ್ಚಲು ಹೋದಳು. “ದಾರ ಬಿಚ್ಚಬೇಡ. ಬಿಚ್ಚಿದರೆ ಅದು ಹಾರಿಹೋಗುತ್ತದೆ” ಎಂದ. “ಹೌದಾ!” ಎಂದು ಒಲೆಯ ಮುಂದಿದ್ದ ಖಾಲಿ ಬೆಂಕಿಪೊಟ್ಟಣದಲ್ಲಿ ಹಾಸಿಗೆಯಂತೆ ಮಡಿಚಿಟ್ಟು ಮೆತ್ತಗೆ ದುಂಬಿಯನ್ನು ಪ್ರೀತಿಯಿಂದ ಎತ್ತಿಕೊಂಡು ಬೆಂಕಿಪೊಟ್ಟಣದಲ್ಲಿ ಹಾಕಿ ಮುಚ್ಚಿ ಇಟ್ಟಳು ತಂಗಿ. ಅಣ್ಣ ಹೇಳಿದ: “ನೋಡು, ನಾನು ಹೋದ ಮೇಲೆ ನೀನು ಇದರ ಸಂಗಡ ಆಟ ಆಡುತ್ತ ಇರು. ಆದರೆ ದಾರ ಬಿಚ್ಚಿದರೆ ಮತ್ತೆ ನಿನಗೆ ಇಂಥ ಚೆಂದದ ದುಂಬಿ ಸಿಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ.

ಅಣ್ಣ ಹಸುಗಳನ್ನು ಮೇಯಿಸಲು ಹೋದ ಮೇಲೆ ಬೇಗ ಕೆಲಸ ಮುಗಿಸಿ ದುಂಬಿ ಜೊತೆ ಆಟ ಆಡಲು ಬೆಂಕಿ ಪೊಟ್ಟಣ ತೆಗೆದು ನೋಡಿದಳು. ದುಂಬಿಯಾದರೋ ಒಂದು ಚೂರು ಎಲೆ ತಿಂದಿರುವುದಿಲ್ಲ. ಎಲೆ ಎಲ್ಲ ಒದ್ದೆಯಾಗಿತ್ತು. ಪ್ರೀತಿಯಿಂದ ಎತ್ತಿಕೊಂಡು “ಯಾಕೆ ದುಂಬಿ, ಎಲೆ ತಿಂದಿಲ್ಲ? ಕಣ್ಣೆಲ್ಲ ಕೆಂಪಾಗಿದೆ! ಯಾಕೆ ಅಳುತ್ತಿದ್ದೀಯಾ?” ಎಂದು ಕೇಳಲು, “ನಾನು ಹೇಗೆ ತಿನ್ನಲಿ, ನನ್ನ ಕತ್ತಲ್ಲಿ ನಿಮ್ಮಣ್ಣ ಕಟ್ಟಿದ ದಾರದಿಂದ ಉರಿಯುತ್ತಿದೆ” ಎಂದಿತು.

“ದಾರ ಬಿಚ್ಚಿದರೆ ನೀನು ಹಾರಿ ಹೋಗಿಬಿಡುತ್ತೀಯಾ! ನನ್ನ ಜೊತೆ ಆಟ ಆಡುವವರು ಯಾರು? ಬೇಡಪ್ಪ ನಿನ್ನಷ್ಟು ಚೆಂದದ ದುಂಬಿಯನ್ನು ಇದೇ ಮೊದಲು ನಮ್ಮಣ್ಣ ನನಗೆ ತಂದು ಕೊಟ್ಟಿರುವುದು” ಎಂದಳು. “ಅದೂ ಅಲ್ಲದೆ ನಿನ್ನಂತೆ ಯಾವ ದುಂಬಿಯೂ ಇಷ್ಟು ಮುದ್ದು ಮುದ್ದಾಗಿ ಮಾತನ್ನಾಡಿರಲಿಲ್ಲ. ಬರಿ ಗುಂಯ್ದುಡುತ್ತ ಹಾರುತ್ತಿದ್ದವು. ನಿನ್ನನ್ನು ಬಿಟ್ಟುಬಿಡುತ್ತೀನಾ?” ಎಂದಳು. “ಸರಿ ಬಿಡು, ನನ್ನ ಕಷ್ಟ ನನಗೆ. ಕತ್ತಿನಿಂದ ರಕ್ತ ಬರುತ್ತಿದ್ದಿಬೇಕು” ಎಂದು ದುಃಖದಿಂದ ಹೇಳಿತು. ಅದನ್ನು ಕೇಳಿ ಅವಳಿಗೆ ಕಣ್ಣಲ್ಲಿ ನೀರೇ ಬಂದುಬಿಟ್ಟಿತು. ‘ದಾರ ಬಿಚ್ಚಿ ಹಾರಿಹೋದರೆ ಚೆಂದದ ಮಾತನ್ನಾಡುವ ದುಂಬಿ ಬೇರೆ. ಅಣ್ಣ ಬೈಯುವುದಿಲ್ಲವೇ? ಆದರೆ ಕತ್ತಿನಿಂದ ರಕ್ತ ಜಿನುಗುತ್ತಿದೆ. ಹೊಟ್ಟೆಗೆ ಬೇರೆ ಏನು ತಿಂದಿಲ್ಲ. ಅಯ್ಯೋ ಪಾಪ, ಹಾರಿ ಹೋಗಬೇಡ ಅಂತ ಹೇಳಿ ದಾರ ಬಿಚ್ಚುತ್ತೇನೆ. ಹಾರಿ ಹೋದರೆ ಅಣ್ಣ ಬೈಯುತ್ತಾನೆ ಅಷ್ಟೇ. ಪಾಪ ಅದಕ್ಕೆ ನೋವು ಕಡಿಮೆಯಾದರೆ ಸಾಕು’ ಎಂದು ಯೋಚಿಸುತ್ತಾ “ದುಂಬಿ ತಾಳು, ಸೂಜಿ ತಂದು ಕತ್ತಿನಲ್ಲಿ ದಾರವನ್ನು ಉಪಾಯವಾಗಿ ಬಿಚ್ಚುತ್ತೇನೆ. ಆದರೆ ನನ್ನನ್ನು ಬಿಟ್ಟು ಹೋಗಬಾರದು” ಎಂದಳು. “ಖಂಡಿತ ಇಲ್ಲ. ನೀನು ದಾರ ಬಿಚ್ಚಿದರೆ ನಿನ್ನ ಜೊತೆ ಆಟ ಆಡಿಕೊಂಡು ನಿನ್ನ ಹತ್ತಿರವೇ ಇರುತ್ತೇನೆ” ಎಂದಿತು. ದುಂಬಿ. ಹೋಗಿ ಸೂಜಿ ತಂದು ಉಪಾಯವಾಗಿ ದಾರ ಬಿಚ್ಚಿ ಗಾಯಕ್ಕೆ ಮುಲಾಮನ್ನು ಹಚ್ಚಿದಳು. ದುಂಬಿಗೆ ಬಹಳ ಸಂತೋಷವಾಗಿ ಅವಳ ಸುತ್ತಮುತ್ತ ಹಾರಾಡುತ್ತಾ ಅವಳನ್ನು ಆಟವಾಡಿಸುತ್ತಾ ಇದ್ದಿತು.

ಹೀಗಿರಲು ಒಂದು ದಿನ ದುಂಬಿ, “ಅಲ್ಲಾ ದಿನಾ ನಿಮ್ಮಣ್ಣ ನಿನ್ನ ಒಬ್ಬಳನ್ನೇ ಬಿಟ್ಟು ಹೋಗುತ್ತಾನಲ್ಲಾ. ನಿಮಗೆ ಯಾರೂ ಇಲ್ಲವಾ?” ಎಂದು ಕೇಳಿತು. “ಇಲ್ಲದೇ ಏನು, ಇಲ್ಲಾ ಇದ್ದಾರೆ. ನಮ್ಮ ಅಪ್ಪ, ಅಮ್ಮ ಸತ್ತ ಮೇಲೆ ನಮ್ಮನ್ನು ಸಾಕಬೇಕಾಗುತ್ತದೆ ಎಂದು ನಮ್ಮ ಮನೆ ಕಡೆ ಯಾರೂ ತಿರುಗಿ ನೋಡಿಲ್ಲ. ನಾವು ಹಾಲು ಮಾರಿಕೊಂಡು, ಹಸು ಸಾಕಿಕೊಂಡು ಜೀವನ ಮಾಡುತ್ತಿದ್ದೇವೆ. ” ಎಂದು ದುಃಖದಿಂದ ಹೇಳಿ, “ಅದು ಸರಿ, ನಿನಗೆ ಯಾರೂ ಇಲ್ಲವಾ?” ಎಂದು ದುಂಬಿಯನ್ನು ಕೇಳಿದಳು.

“ಇಲ್ಲದೇ ಏನು, ದೊಡ್ಡ ಕುಟುಂಬ. ಒಂದು ದೊಡ್ಡ ಹೂತೋಟವೇ ನಮ್ಮ ಮನೆ. ಅಲ್ಲಿ ಅಪ್ಪ-ಅಮ್ಮ, ಅಜ್ಜಿ-ಅಜ್ಜ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮ ಇನ್ನು ಎಲ್ಲಾ ಬಂಧುಗಳು ಇದ್ದಾರೆ. ನಮ್ಮಮ್ಮನಿಗೆ ನನ್ನನ್ನು ಕಂಡರೆ ತುಂಬ ಪ್ರೀತಿ. ಯಾಕೆಂದರೆ, ನಾನೇ ಕೊನೆ ಮಗ ಅವರಿಗೆ. ಅವಳು ನಾನು ತಪ್ಪಿಸಿಕೊಂಡಿರುವುದನ್ನು ನೋಡಿ ಇರುತ್ತಾಳೋ, ಸತ್ತು ಹೋಗಿರುತ್ತಾಳೋ ಏನೋ” ಎಂದು ಅಳಲು ಪ್ರಾರಂಭಿಸಿತು.

“ಯಾಕೆ ಅಳುತ್ತೀಯಾ, ಸುಮ್ಮನೆ ಇರು. ಈಗ ನನ್ನ ಜೊತೆ ಸಂತೋಷವಾಗಿ ಇದ್ದೀಯಲ್ಲ?” ಎಂದು ಸಮಾಧಾನ ಮಾಡಿದಳು. “ನಿನಗೆ ಗೊತ್ತಿಲ್ಲ. ನಮ್ಮ ಪ್ರಪಂಚ ಎಷ್ಟೊಂದು ಸುಂದರ, ಸಂತೋಷವಾಗಿರುತ್ತದೆ ಎಂದು. ನಿನ್ನ ಪ್ರೀತಿಗೆ, ಮಾತಿಗೆ ಕಟ್ಟುಬಿದ್ದು ನಾನು ನಿನ್ನ ಜೊತೇಲಿ ಇದ್ದೇನೆ ಗೊತ್ತಾ? ಬೇಕಾದರೆ ನೀನು ನನ್ನ ರೆಕ್ಕೆಯ ಮೇಲೆ ಕುಳಿತುಕೊಂಡರೆ ಹೋಗುತ್ತೇನೆ. ನಿಮ್ಮಣ್ಣ ಬರುವುದರೊಳಗಾಗಿ ಬಂದುಬಿಡಬಹುದು. ಏನಂತೀಯಾ?” ಎಂದು ಕೇಳಿತು.

“ಬೇಡಪ್ಪ, ಯಾಕೋ ನನಗೆ ಭಯವಾಗುತ್ತಿದೆ” ಎಂದಳು ತಂಗಿ. “ಭಯವೆಂತಹದ್ದು ನನಗೂ ನಮ್ಮ ಅಪ್ಪ-ಅಮ್ಮನ ನೋಡದೆ ಎಷ್ಟು ದುಃಖವಾಗಿದೆ ಗೊತ್ತಾ?” ನೀನು ನಿಮ್ಮಣ್ಣನ ಬಿಟ್ಟು ಒಂದು ದಿನ ಇದ್ದೀಯಾ? ಹೇಳು” ಎಂದು ಮರುಪ್ರಶ್ನೆ ಹಾಕಿತು. “ಅದು ಸರಿ, ನಿನ್ನನ್ನು ನೋಡಿದರೆ ನನಗೂ ದುಃಖವಾಗುತ್ತದೆ. ಆದರೆ ಅಣ್ಣನಿಗೆ ಗೊತ್ತಾದರೆ ?” ನಿಮ್ಮಣ್ಣನಿಗೂ ಗೊತ್ತಾಗದಂತೆ ಅವನು ಬರುವ ಮುಂಚೆ ಬಂದುಬಿಡಾನ ಸರಿತಾನೆ. ಹೋಗಿ ತಲೆ ಬಾಚಿ ಬೇಗ ಬಾ” ಎಂದಿತು ದುಂಬಿ. ಮನಸ್ಸಿಲ್ಲದಿದ್ದರೂ ದುಂಬಿಯ ಪ್ರೀತಿಯ ಮಾತಿಗೆ ಕಟ್ಟುಬಿದ್ದು ತಲೆಬಾಚಿ ಮಡಿ ಬಟ್ಟೆಯನ್ನುಟ್ಟು ಬಂದು ಮುಂಬಾಗಿಲನ್ನು ಒಳಗಿನಿಂದ ಹಾಕಿ ಬಂದು ದುಂಬಿಯ ರೆಕ್ಕೆಯ ಮೇಲೆ ಕುಳಿತುಕೊಳ್ಳಲು, ದುಂಬಿ ಆನಂದದಿಂದ ಹಾಡುತ್ತಾ ಆಕಾಶದತ್ತ ಹಾರಿತು.

ಎಲ್ಲೆಲ್ಲೂ ಬಣ್ಣ ಬಣ್ಣದ ಚಿಕ್ಕ ದೊಡ್ಡ ಸುಂದರ ಅತಿ ಸುಂದರ ಹೂವುಗಳು, ಮೊಗ್ಗುಗಳು, ಗೊಂಚಲು ಗೊಂಚಲಾಗಿ ಬಿಡಿಬಿಡಿಯಾಗಿ, ಗುಂಪುಗುಂಪಾಗಿ, ಹಸಿರಿನ ಮೇಲೆ ಸಾಮ್ರಾಜ್ಯ ನಡೆಸುತ್ತಿವೆ. ಕೈಗೆ ಎಟುಕಿದರೆ ಸಿಗುವಂಥಹ ಅನೇಕ ರೀತಿಯ ಹಣ್ಣುಗಳು ಜೊಂಪೆಜೊಂಪೆಯಾಗಿ ಇಳಿ ಬಿದ್ದಿದ್ದವು. ಬಣ್ಣ ಬಣ್ಣದ ಚಿಕ್ಕದೊಡ್ಡ ಚಿಟ್ಟೆಗಳು, ದುಂಬಿಗಳು ಹಾರಾಡುತ್ತ ಆಟವಾಡುತ್ತಿದ್ದವು. ದೊಡ್ಡಮರ, ಚಿಕ್ಕಮರಗಳು ಹಸಿರಿನಿಂದ ಕಂಗೊಳಿಸುತ್ತಿತ್ತು. “ಓ ನಾನೇನು ಸ್ವಪ್ನಲೋಕಕ್ಕೆ ಬಂದಿರುವೆನೇ? ಇದೇನಿದು ಮಾಯಾಲೋಕ ದುಂಬಿ” ಎಂದು ಕೇಳಿದಳು.

“ಇದು ಮಯಾಲೋಕವಲ್ಲ, ಇದು ನಮ್ಮ ಲೋಕ. ಬಾ, ನಿನ್ನ ನಮ್ಮ ಅಪ್ಪ-ಅಮ್ಮನ ಹತ್ತಿರ ಕರೆದುಕೊಂಡು ಹೋಗುತ್ತೇನೆ” ಎಂದು ಒಂದು ಮರದ ಪೊಟರೆ ಹತ್ತಿರ ಕರೆದುಕೊಂಡು ಹೋಗಿ ಕುಳ್ಳಿರಿಸಿತು. ಅಲ್ಲಿ ದುಂಬಿಯ ಅಮ್ಮ ಹಾಸಿಗೆ ಹಿಡಿದಿತ್ತು. ತಂದೆ ದುಃಖದಿಂದ ಪಕ್ಕ ಕುಳಿತಿದ್ದಿತು. ದುಂಬಿ ಬಂದುದು ನೋಡಿ ಸಂತೋಷದಿಂದ ದುಂಬಿ ಅಮ್ಮ ಎದ್ದು ಕೂತು ಸಮಾಚಾರವೆಲ್ಲ ಕೇಳಿತು. “ನೀನು ಮನುಷ್ಯರ ಕೈಗೆ ಸಿಕ್ಕಿಹಾಕಿಕೊಂಡು ಇಷ್ಟು ಹೊತ್ತಿಗೆ ಸತ್ತೇಹೋಗಿರುತ್ತೀಯಾ ಎಂದುಕೊಂಡಿದ್ದೆವು. ನೀನು ಬದುಕಿ ಬಂದುದು ನೋಡಿ ಎಷ್ಟು ಸಂತೋಷ ಆಗುತ್ತಿದೆ ಗೊತ್ತಾ?” ಎಂದು ಅಪ್ಪ-ಅಮ್ಮ ಇಬ್ಬರು ತಬ್ಬಿಕೊಂಡು ಸಂತೋಷದಿಂದ ಆನಂದಬಾಷ್ಪ ಸುರಿಸಿದರು. ಆಗ ದುಂಬಿ “ನಾನು ಬದುಕಿ ಬರಲಿಕ್ಕೆ ಇವಳೇ ಕಾರಣ. ನನ್ನನ್ನು ಉಳಿಸಿದವಳು ಇವಳು” ಎಂದು ತಂಗಿಯನ್ನು ಪರಿಚಯ ಮಾಡಿಕೊಡುತ್ತಾನೆ. “ಹೌದು! ಎಷ್ಟು ಚೆಂದದ ಹುಡುಗಿ, ಒಳಗೆ ಜೇನು ಇದೆ ಕೊಡು. ಹಣ್ಣುಗಳಿವೆ, ಅವಳಿಗೆ ಹೊಟ್ಟೆತುಂಬ ತಿನ್ನಿಸು” ಎಂದರು ದುಂಬಿಯ ತಾಯಿತಂದೆ. “ಅದು ಸರಿ ಅಮ್ಮ, ನಾವು ಮತ್ತೆ ಸಾಯಂಕಾಲದ ಒಳಗೆ ಹೋಗಬೇಕು. ಇಲ್ಲದಿದ್ದರೆ ಇವಳ ಅಣ್ಣ ರೋಧಿಸುತ್ತಾನೆ” ಎಂದು ದುಂಬಿ ತನ್ನ ತಾಯಿಗೆ ಹೇಳಿತು. ಮೃದು ಹೃದಯಿಗಳಾದ ದುಂಬಿಗಳು “ಹೌದು ಹಾಗಾದರೆ ಜೇನುತುಪ್ಪ, ಹಣ್ಣುಗಳನ್ನು ತಿಂದು ಸಾಯಂಕಾಲದವರೆಗೆ ಆಟ ಆಡುತ್ತ ಆಮೇಲೆ ಹೋಗಿಬನ್ನಿ. ಮತ್ತೆ ನಾಳೆ ಬರುವೆ ತಾನೆ?” ಎಂದು ಕೇಳಿದವು. “ಖಂಡಿತವಾಗಿಯೂ ನಾಳೆ ಮತ್ತೆ ಬರುತ್ತೇವೆ” ಎಂದು ಹೇಳಿ ಪೊಟರೆಯಿಂದ ಹೊರಬಂದು ಆಟ ಆಡಲಿಕ್ಕೆ ತೊಡಗಿದರು.

ಹೀಗೆ ಹಲವಾರು ದಿನಗಳು ಕಳೆದವು. ದುಂಬಿಯ ಅಪ್ಪ-ಅಮ್ಮ ಹುಡುಗಿಯನ್ನು ಕರೆದು, “ನೋಡು, ನೀವಿಬ್ಬರು ತುಂಬಾ ಅನ್ಯೂನ್ಯವಾಗಿ, ಪ್ರೀತಿಯಿಂದ ಇದ್ದೀರಾ ಅಲ್ಲವಾ?” ಎಂದು ಕೇಳಿದೆವು. “ಅದಕ್ಕೆ ಹುಡುಗಿ ನಾಚಿಕೆಯಿಂದ “ಹೌದು!” ಎಂದಳು. “ಹಾಗಾದರೆ ಮತ್ತೆ ನಮ್ಮ ದುಂಬಿಯನ್ನು ಮದುವೆ ಆಗಿಬಿಡು” ಎಂದರು. ಅದಕ್ಕೆ ಹುಡುಗಿ “ದುಂಬಿನ ಮದುವೆಯಾಗೋದು ಹೇಗೆ? ನನಗೇನೋ ಒಂದು ಗಳಿಗೆ ಅದನ್ನು ಬಿಟ್ಟು ಇರಲಿಕ್ಕೆ ಇಷ್ಟವಿಲ್ಲ. ನಾನು ಅದನ್ನು ತುಂಬ ಪ್ರೀತಿಸುತ್ತೇನೆ” ಎಂದಳು. “ಹೌದಾ! ಆದರೆ ಒಂದು ಕೆಲ್ಸ ಮಾಡು, ಅಲ್ಲಿ ಕಾಣುವ ಬಿಲ್ವಪತ್ರೆ ಮರದ ಕೆಳಗೆ ಕುಳಿತು ನಮ್ಮ ದೇವರಾದ ಶಿವನನ್ನು ಕುರಿತು ತಪಸ್ಸು ಮಾಡು. ನಿನ್ನ ಭಕ್ತಿಗೆ ಶಿವ ಮೆಚ್ಚೇಮೆಚ್ಚುತ್ತಾನೆ. ಅವನು ಪ್ರತ್ಯಕ್ಷನಾದ ಮೇಲೆ ದುಂಬಿಯನ್ನು ಮಾನವನಾಗೋ, ಇಲ್ಲ ನೀನು ದುಂಬಿಯಾಗೋ ಹಾಗೆ ವರ ಕೇಳು” ಎಂದು ಸಲಹೆ ನೀಡಿದರು. ಅದಕ್ಕೆ ಹುಡುಗಿ “ದುಂಬಿ ಮಾನವನಾದರೇ ನಿಮಗೆ ಇಷ್ಟವೇ?” ಎಂದು ಆಶ್ಚರ್ಯದಿಂದ ಕೇಳಿದಳು. “ಹೌದು, ನನ್ನ ಮಗ ಸಂತೋಷದಿಂದ ಹೇಗಿದ್ದರೂ ಸರಿ” ಎಂದರು. “ನೋಡಿ, ನಾನು ದುಂಬಿಯಾದರೆ ನಮ್ಮಣ್ಣನಿಗೆ ತುಂಬ ದುಃಖವಾಗುತ್ತದೆ. ಈಗ ಏನು ಮಾಡುವುದು ನೀವೇ ಹೇಳಿ” ಎಂದಳು ಹುಡುಗಿ. “ಸರಿ, ದುಂಬಿನ ಮನುಷ್ಯನನ್ನಾಗಿ ಮಾಡೋ ವರನೇ ಕೇಳು, ಪರವಾಗಿಲ್ಲ” ಎಂದವು ದುಂಬಿಗಳು.

ದುಂಬಿಗಳೆಲ್ಲ ಬಿಲ್ವಪತ್ರದ ಮರದ ಹತ್ತಿರ ತಮ್ಮ ರೆಕ್ಕೆಗಳಿಂದ ಕಸ ತೆಗೆದು ಶುಭ್ರ ಮಾಡಿದವು. ಹುಡುಗಿ ಅಲ್ಲಿನ ಪನ್ನೀರಿನಂತಹ ನೀರಿನಲ್ಲಿ ಸ್ನಾನ ಮಾಡಿ ಮಡಿಯುಟ್ಟು ತಪಸ್ಸಿಗೆ ಕೂತಳು. ದುಂಬಿಯು ಅವಳ ಎದುರಿಗೆ ಹಾರುವುದು ಮರೆತು ಕುಳಿತುಕೊಂಡಿತು. ಹೀಗೆ ದಿನಗಳು ಉರುಳಲು ಕೈಲಾಸದಲ್ಲಿದ್ದ ಶಿವನಿಗೆ ಹುಡುಗಿಯು ತಪಸ್ಸು ಮಾಡುತ್ತಿರುವುದು ತಿಳಿದು ಬಂದಿತು. ಪುಟ್ಟ ಹುಡುಗಿ ತಪಸ್ಸು ಮಾಡುತ್ತಿರುವುದನ್ನು ನೋಡಿ ಹೃದಯ ಕರಗಿತು. ಶಿವನು ಹುಡುಗಿಯ ಮುಂದೆ ಪ್ರತ್ಯಕ್ಷನಾದನು. ಶಿವನನ್ನು ಕಂಡು ಹುಡುಗಿ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದಳು. ಶಿವನು ಹುಡುಗಿಯನ್ನು “ಏತಕ್ಕಾಗಿ ತಪಸ್ಸು ಮಾಡುತ್ತಿದ್ದಿಯೇ?’ ಎಂದು ಕೇಳಲು, ಹುಡುಗಿ “ತನ್ನ ಪ್ರೀತಿಯ ದುಂಬಿಯನ್ನು ಮಾನವನನ್ನಾಗಿ ಮಾಡಬೇಕೆಂದು ಶಿವನಲ್ಲಿ ಕೇಳಿಕೊಂಡಳು. ಶಿವನು “ತಥಾಸ್ತು” ಎಂದು ಮಾಯವಾದನು. ಮಾನವನಾದ ದುಂಬಿಯನ್ನು ಕಂಡು ಅದರ ಅಪ್ಪ, ಅಮ್ಮ, ಬಂಧು ಬಳಗಕ್ಕೆಲ್ಲಾ ತುಂಬ ಸಂತೋಷವಾಯಿತು. ಅವುಗಳೆಲ್ಲ ಸೇರಿ ಇಬ್ಬರಿಗೂ ಬಹು ವಿಜೃಂಭಣೆಯಿಂದ ಮದುವೆ ಮಾಡಿದರು. ಮದುವೆಯಾದ ಮೇಲೆ ಹುಡುಗಿ ತನ್ನ ಅಣ್ಣನನ್ನು ನೋಡಬೇಕೆಂದು ಮಾನವ ಗಂಡು ದುಂಬಿಯನ್ನು “ನಾವು ಹೇಳದೆ ಕೇಳದೆ ಬಂದಿರುವುದರಿಂದ ಅವನ ಪರಿಸ್ಥಿತಿ ಹೇಗಿದೆಯೋ ಏನೋ” ಎಂದು ಹೇಳಿದಳು. ಇವಳ ಮಾತನ್ನು ಕೇಳಿದ ಗಂಡ ದುಂಬಿ ಅಣ್ಣನನ್ನು ನೋಡಲು ಹೊರಡುತ್ತಾರೆ.

ಈ ಕಡೆ ಅಣ್ಣನಾದರೋ ಇದ್ದೊಬ್ಬ ತಂಗಿ ಇದ್ದಕ್ಕಿದ್ದಂತೆ ಮಾಯವಾದುದನ್ನು ಕಂಡು ಅತ್ತು ಕರೆದು ಊಟ-ತಿಂಡಿ ಸರಿಯಾಗಿ ಮಾಡದೆ ಹುಚ್ಚನೇ ಆಗಿದ್ದನು. ಒಂದು ದಿನ ಇದ್ದಕ್ಕಿದ್ದಂತೆ ಮದುವೆ ಮಾಡಿಕೊಂಡು ಸಂತೋಷದಿಂದ ಅವರನ್ನು ಎದುರುಗೊಂಡು ಮನೆಯೊಳಕ್ಕೆ ಬರಮಾಡಿಕೊಂಡನು.

ಅಣ್ಣ-ತಂಗಿ, ತಂಗಿ ಗಂಡನಾದ ದುಂಬಿ ಮೂರು ಮಂದಿಯೂ ಅಲ್ಲಿ ಇಲ್ಲಿ ಎರಡೂ ಕಡೆ ಓಡಾಡಿಕೊಂಡಿರುತ್ತ ಎಲ್ಲರಿಗೂ ಪ್ರೀತಿ ಪಾತ್ರರಾಗಿ ಬಹುಕಾಲ ಸುಖವಾಗಿ ಬಾಳುತ್ತಿದ್ದರು.

 

ಮೋಸಗಾರ ಚೆಲುವ | Interesting Kannada Love Stories

 

ಅಣ್ಣ ತಂಗಿ ಪ್ರೀತಿಯ ಕಥೆ, Kannada love story, Brother sister love story, Kannada family stories, Inspirational love stories, Kannada moral stories, Heartwarming Kannada tales, Sibling love in Kannada, Emotional Kannada stories, Family bonding in Kannada, Kannada short love stories, Love story in Kannada with morals, Kannada storytelling, Sibling relationships, Family love in Kannada.

 

Follow on WhatsApp

 

FAQ:

1. What is “ಅಣ್ಣ ತಂಗಿ ಪ್ರೀತಿಯ ಕಥೆ”?
It is a heartwarming Kannada love story about the deep bond and love between a brother and sister.

2. What is the moral of the story?
The story emphasizes the importance of sibling love and family relationships.

3. Can I learn more Kannada love stories on your blog?
Yes, our blog features several emotional and inspiring Kannada love stories.

4. Is this story suitable for all age groups?
Yes, it’s a family-friendly story that highlights the beauty of sibling relationships.

5. How can I improve my Kannada by reading these stories?
Reading these stories will help you learn new vocabulary, sentence structures, and cultural aspects of Kannada.

Leave a Comment

Your email address will not be published. Required fields are marked *

Scroll to Top